ಚಿತ್ತಾಪುರ
ಕರ್ನಾಟಕದ ಗುಲ್ಬರ್ಗ ಜಿಲ್ಲೆಯ ಒಂದು ತಾಲ್ಲೂಕು. ಆ ತಾಲ್ಲೂಕಿನ ಕೇಂದ್ರ. ಚಿತ್ತಾಪುರ ತಾಲ್ಲೂಕನ್ನು ಗುಲ್ಬರ್ಗ, ಚಿಂಚೋಳೀ, ಸೇಡಂ ಯಾದಗಿರಿ ಮತ್ತು ಜೀವರಗಿ ತಾಲ್ಲೂಕುಗಳು ಸುತ್ತುವರಿದಿವೆ. ಸಮುದ್ರ ಪಾತಳಿಯಿಂದ 1,471 ಎತ್ತರವಿರುವ ಈ ತಾಲ್ಲೂಕಿನ ವಿಸ್ತೀರ್ಣ 691 ಚ.ಮೈ. ಜನಸಂಖ್ಯೆ 3,66,524 (2001).

	ತಾಲ್ಲೂಕಿನ ಬಹುಭಾಗ ಕಪ್ಪುನೆಲ. ಆದರೆ ನಾಲವಾರದ ಸುತ್ತಮುತ್ತ ಕೆಂಪುಮಿಶ್ರಿತ ಉಸುಬಿನ ನೆಲವಿದೆ. ತಾಲ್ಲೂಕಿನಲ್ಲಿ ಹರಿಯುವ ನದಿಗಳು ಭೀಮಾ, ಕಾಗಿಣಾ ಮತ್ತು ಬೆಣ್ಣೆತೊರೆ. ಈ ನದಿಗಳಿಂದಲೂ ಕುಂಬಾರವಾಡಿಕೆರೆ, ಆಲಹಳ್ಳಿ ಕೆರೆ, ಮುಗಳ ನಾಗಾವಿಯ ಬಸವೇಶ್ವರ ಕೆರೆಗಳಿಂದಲೂ ಚಿಕ್ಕ ನೀರಾವರಿ ಯೋಜನೆಯ ಅಡಿಯಲ್ಲಿ ತೋಡಿಸಿದ ಬಾವಿಗಳಿಂದಲೂ ವ್ಯವಸಾಯಕ್ಕೆ ನೀರು ಒದಗುತ್ತದೆ.

	ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 33.22 ಜೂನ್‍ನಿಂದ ಅಕ್ಟೋಬರ್‍ವರೆಗೆ ಮಳೆಗಾಲ. ಜೋಳ, ಬತ್ತ, ನೆಲಗಡಲೆ, ತೊಗರಿ, ಕಡಲೆ, ಗೋದಿ, ಮೆಣಸಿನಕಾಯಿ, ಕಾಯಿಪಲ್ಲೆ ಇಲ್ಲಿಯ ಬೆಳೆಗಳು.

	ತಾಲ್ಲೂಕಿನ ಶೇ.90ರಷ್ಟು ಜನಕ್ಕೆ ಒಕ್ಕಲತನವೇ ಕಸುಬು. ಕೆಲವರ ಕಸುಬುನೇಯ್ಗೆ. ಶಹಾಬಾದಿ ಕಲ್ಲಿನ ಗಣಿಗಳಲ್ಲೂ ಕೆಲವರು ಕೆಲಸ ಮಾಡುತ್ತಾರೆ. ಈ ಕಲ್ಲುಗಳನ್ನು ಮನೆಗಳ ನೆಲಕ್ಕೆ ಹಾಸುವುದಕ್ಕೂ ಚಾವಣಿಗೆ ಹೊದಿಸುವುದಕ್ಕೂ ಉಪಯೋಗಿಸುತ್ತಾರೆ. ಈ ಕಲ್ಲುಗಳನ್ನು ಚೌಕವಾಗಿ ಒಡೆಯುವುದರಲ್ಲೂ ಇವನ್ನು ಉಜ್ಜಿ ಮಿಂಚುವಂತೆ ಮಾಡಿ ಒಪ್ಪ ಹಾಕುವುದರಲ್ಲೂ ಇಲ್ಲಿ ಅನೇಕ ಜನರು ನಿಷ್ಣಾತರು. ಈ ಉದ್ದಿಮೆಗಳನ್ನು ವಿಶೇಷವಾಗಿ ಒಡ್ಡರೂ ಲಂಬಾಣಿ ಜನರೂ ನೆಚ್ಚಿಕೊಂಡಿದ್ದಾರೆ. ಆದ್ದರಿಂದಲೇ ಚಿತ್ತಾಪುರ ತಾಲ್ಲೂಕಿನ ಎಲ್ಲ ಭಾಗಗಳಲ್ಲೂ ಈ ಜನ ಕಾಣಸಿಗುತ್ತಾರೆ.

	ಶಹಾಬಾದ್ ಮತ್ತು ವಾಡಿಗಳಲ್ಲಿ ಸ್ಥಾಪಿತವಾಗಿರುವ ಸಿಮೆಂಟ್ ಕಾರ್ಖಾನೆಗಳು ಈ ತಾಲ್ಲೂಕಿನ ಔದ್ಯೋಗಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿವೆ. ಶಹಾವಾದಿನಲ್ಲಿ ಎಂಜಿನಿಯರಿಂಗ್ ಕಾರ್ಖಾನೆಯೊಂದಿದೆ. ಚಿತ್ತಾಪುರ ಪಟ್ಟಣದಲ್ಲೂ ಒಂದು ಸಿಮೆಂಟ್ ಕಾರ್ಖಾನೆಯನ್ನು ಆರಂಭಿಸುವ ಯೋಜನೆ ಸರ್ಕಾರದ ಮುಂದೆ ಇದೆ.

	ಶಹಾಬಾದಿ ಕಲ್ಲುಗಳಿಂದ ನೀರು ತುಂಬುವ ಕೇಲುಗಳನ್ನು ಸಿದ್ಧಪಡಿಸುವ, ಸಿಮೆಂಟಿನಿಂದ ಒಲೆಗಳನ್ನೂ ಕಿಟಕಿಗಳನ್ನೂ ವೃಂದಾವನಗಳನ್ನೂ ಮಾಡುವ ಸಣ್ಣ ಕೈಗಾರಿಕೆಗಳು ತಾಲ್ಲೂಕಿನಲ್ಲಿ ಬೆಳೆದಿವೆ. ಜೋಳ, ಕುಸುಬಿ, ನೆಲಗಡಲೆ ಮೊದಲಾದ ಸರಕುಗಳ ವ್ಯಾಪಾರದಲ್ಲಿ ಕೆಲವರು ನಿರತರಾಗಿದ್ದಾರೆ. ಶಿರೂರಿನಲ್ಲಿ ದನದ ಜಾತ್ರೆ ನಡೆಯುತ್ತದೆ.
ಧೋತ್ರ, ಅಂಗಿ, ರುಮಾಲು ಸಾಮಾನ್ಯವಾಗಿ ಗಂಡಸರ ಉಡುಗೆ ತೊಡುಗೆ; ಸೀರೆ, ಕುಪ್ಪುಸ, ಮಣಿಸರಗಳು, ಕಾಲುಂಗುರ, ನತ್ತು, ಪಿಲ್ಲೆ-ಇವು ಹೆಂಗಸರ ಸಾಮಾನ್ಯ ಉಡುಗೆ ತೊಡುಗೆ. ಸಾಮಾನ್ಯವಾಗಿ ಇಲ್ಲಿಯ ಜನ ಸರಳರು; ಸೌಜನ್ಯಶೀಲರು. ಅಕ್ಷರಸ್ಥರ ಸಂಖ್ಯೆ ಕ್ರಮೇಣ ಬೆಳೆಯುತ್ತಿದೆ. ತಾಲ್ಲೂಕಿನಲ್ಲಿ 145 ಪ್ರಾಥಮಿಕ ಶಾಲೆಗಳೂ 15 ಪ್ರೌಢಶಾಲೆಗಳೂ ಹೈದರಾಬಾದು ಕರ್ನಾಟಕ ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಕಾಲೇಜೂ ಇವೆ.

ಚಿತ್ತಾಪುರ ತಾಲ್ಲೂಕಿಗೆ ದೀರ್ಘ ಇತಿಹಾಸವಿದೆ; ಉತ್ತಮ ಸಂಸ್ಕøತಿ ಮತ್ತು ನಾಗರಿಕತೆಗಳ ಹಿನ್ನೆಲೆಯುಂಟು. ಅನೇಕ ಶಿಲಾಶಾಸನಗಳೂ ದೇವಾಲಯಗಳೂ ಇತರ ಅವಶೇಷಗಳೂ ಈ ಮಾತಿಗೆ ಪ್ರಮಾಣಗಳಾಗಿ ಉಳಿದಿವೆ. ಈ ಸಾಕ್ಷಿಗಳು ತಾಲ್ಲೂಕಿನ ಹಳ್ಳಿಹಳ್ಳಿಗಳಲ್ಲೂ ದೊರೆಯುತ್ತವೆ. ತಾಲ್ಲೂಕಿನ ಮುಖ್ಯವಾದ ಕೆಲವು ಸ್ಥಳಗಳು ಇವು;

1. ಚಿತ್ತಾಪುರ ಪಟ್ಟಣ ಈ ತಾಲ್ಲೂಕಿನ ಮುಖ್ಯಸ್ಥಳ. ವಾಡಿ-ಹೈದರಾಬಾದ್ ರೈಲುರಸ್ತೆಯ ಮೇಲೆ ಇದೆ. ಜನಸಂಖ್ಯೆ 1,28,270 (2001). ಇಲ್ಲಿ ಶಹಾಬಾದಿ ಕಲ್ಲಿನ ಗಣಿಗಳಿವೆ. ಮುಸಲ್ಮಾನರ ಪವಿತ್ರ ಸ್ಥಳವಾದ ಚಿತಾವಲಿ ದರ್ಗಾ ಇಲ್ಲಿಂದ ಸುಮಾರು ಒಂದು ಫರ್ಲಾಂಗ್ ದೂರದಲ್ಲಿದೆ.

2. ಶಹಾಬಾದ್ ಮುಂಬಯಿ-ಮದ್ರಾಸ್ ರೈಲು ಮಾರ್ಗದ ಮೇಲೆ ವಾಡಿ ಜಂಕ್ಷನ್‍ನಿಂದ 8 ಮೈ. ದೂರದಲ್ಲಿ ಇರುವ ಒಂದು ಕೈಗಾರಿಕಾ ಪಟ್ಟಣ. ಜನಸಂಖ್ಯೆ 66,040 (2001). ಸಿಮೆಂಟು ಉತ್ಪಾದನೆಗೆ ಬೇಕಾಗುವ ದೊಡ್ಡ ಸಲಕರಣೆಗಳಿವೆ. ಈ ಊರಿನ ಬಳಿ ಕುರುಬರಿಗೆ ಅಧಿದೇವತೆಯಾದ ಬೀರಪ್ಪನ ಮಂದಿರ ಒಂದು ದಿನ್ನೆಯ ಮೇಲೆ ಇದೆ. ಅದನ್ನು ಬೀರಪ್ಪನ ಬೆಟ್ಟವೆಂದು ಕರೆಯುತ್ತಾರೆ. ಹಳೆಯ ಶಹಾಬಾದಿನಲ್ಲಿ ಒಂದು ಪುರಾತನ ಕೋಟೆಯಿದೆ. 

3. ನಾಗಾಯಿ : ಚಿತ್ತಾಪುರದಿಂದ 2 ಮೈ. ಅಂತರದಲ್ಲಿರುವ ಹಾಳುಬಿದ್ದ ಊರು. ಪ್ರಾಕ್ತನ ದೃಷ್ಟಿಯಿಂದ ಬಹು ಮಹತ್ತ್ವವುಳ್ಳದ್ದು. ಇಲ್ಲಿ ಹಿಂದೆ, ಕಲ್ಯಾಣದ ಚಾಳುಕ್ಯ ವಿಕ್ರಮಾದಿತ್ಯನ ಸಭಾಸ್ಥಾನವನ್ನು ಅಲಂಕರಿಸಿದ್ದ ಕಾಳಿದಾಸ ದಂಡನಾಥನೆಂಬ ಮಂತ್ರಿ ವಿಶ್ವವಿದ್ಯಾಲಯ ಮಾದರಿಯ ಶಿಕ್ಷಣ ನೀಡುವ ವ್ಯವಸ್ಥೆ ಮಾಡಿಸಿದ್ದನೆಂದೂ ಬೇರೆ ಬೇರೆ ದೇಶಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಿದ್ದರೆಂದೂ ತಿಳಿದುಬರುತ್ತದೆ. 200 ವಿದ್ಯಾರ್ಥಿಗಳಿಗೆ ವೇದಾಭ್ಯಾಸಕ್ಕೂ 50 ವಿದ್ಯಾರ್ಥಿಗಳಿಗೆ ಶಾಸ್ತ್ರಾಭ್ಯಾಸಕ್ಕೂ ಇಲ್ಲಿ ಅವಕಾಶ ಕಲ್ಪಿಸಲಾಗಿತ್ತೆಂದೂ ಇವನ್ನೂ ನ್ಯಾಯ ಮೀಮಾಂಸಾದಿಗಳನ್ನೂ ಬೋಧಿಸಲು ಅನೇಕ ಅಧ್ಯಾಪಕರಿದ್ದರೆಂದೂ ತಿಳಿದು ಬರುತ್ತದೆ. ಘಟಿಕದಲ್ಲಿದ್ದ ಒಟ್ಟು ವಿದ್ಯಾರ್ಥಿ ಸಂಖ್ಯೆ 257. ಅವರಿಗೆಲ್ಲ ಯೋಗ್ಯವಾದ ವಸತಿಗೃಹಗಳನ್ನು ಕಟ್ಟಿಸಿದ್ದುದಲ್ಲದೆ ಶ್ರೇಷ್ಠವಾದ ಪುಸ್ತಕ ಭಂಡಾರವನ್ನೂ ಅವನು ನಿರ್ಮಿಸಿಕೊಟ್ಟಿದ್ದ. ಹೀಗೆ ಪುಸ್ತಕಭಂಡಾರವಿರುವ ಜ್ಞಾನಪೀಠವನ್ನು ಕಟ್ಟಿದವರಲ್ಲಿ ಮಂತ್ರಿಯೇ ಮೊತ್ತಮೊದಲಿಗ. ಈ ಮಾತಿಗೆ ಅಲ್ಲಿಯ ಒಂದು ಶಾಸನ ಪ್ರಮಾಣ ನುಡಿಯುತ್ತಿದೆ. ಅವನು ಸಾಹಿತ್ಯದಲ್ಲಿ ಅಭಿರುಚಿಯುಳ್ಳವನೂ ಸೈನ್ಯ ನಡೆಸುವುದರಲ್ಲಿ ನಿಷ್ಣಾತನೂ ರಾಜಕಾರಣದಲ್ಲಿ ಬೃಹಸ್ಪತಿಯೂ ಧೈರ್ಯದಲ್ಲಿ ಗರುಡನೂ ಆಗಿದ್ದು ನಾಗಾಯಿ ಅಗ್ರಹಾರವನ್ನು ಸ್ಥಾಪಿಸಿದನೆಂದೂ 2ನೆಯ ಜಯಸಿಂಹನಿಂದ. 

	ಈ ಅಗ್ರಹಾರದ ಶಾಸನವನ್ನು ಮಾಡಿಸಿದನೆಂದೂ ತಿಳಿದುಬರುತ್ತದೆ. ಒಂದನೆಯ ಕಾಳಿದಾಸ ನಾಗಾಯಿಯ ಅಗ್ರಹಾರವನ್ನು ಸ್ಥಾಪಿಸಿದವನಿರಬೇಕೆಂದು ಶಾಸನಗಳಿಂದ ಗೊತ್ತಾಗುತ್ತದೆ. ಇವನು ಮಧುಸೂದನನ ಮಗ. ಎರಡನೆಯ ಕಾಳಿದಾಸ ಅನುಕ್ರಮವಾಗಿ 2ನೆಯ ಜಯಸಿಂಹ, 1ನೆಯ ಸೋಮೇಶ್ವರ, 4ನೆಯ ವಿಕ್ರಮಾದಿತ್ಯ ಇವರ ಪ್ರಧಾನಿಯಾಗಿದ್ದನೆಂದು ತಿಳಿದುಬರುತ್ತದೆ. ಇದು ಹಿಂದೆ ಕುಂತಳದೇಶದ ಏಯಲು 300 ಪ್ರಾಂತ್ಯದ ರಾಜಧಾನಿಯಾಗಿತ್ತೆಂದು ಹೇಳಲಾಗಿದೆ. ಇಷ್ಟೇ ಅಲ್ಲ, ಇಲ್ಲಿ ನಾಗಾಯಿಯ ಎಲ್ಲಮ್ಮ ಅಥವಾ ನಾಗಲಾಂಬಿಕಾ ದೇವಿಯ ಶಕ್ತಿಪೀಠವುಂಟು. ಆದ್ದರಿಂದ ಇಲ್ಲಿಗೆ ಸಾವಿರಾರು ಜನರು ಭಕ್ತಿಯಿಂದ ಯಾತ್ರೆಗಾಗಿ ಬರುತ್ತಿರುತ್ತಾರೆ. ಈ ದೇವಾಲಯದ ಸುತ್ತಣ ಪ್ರದೇಶ ನೀರಿನ ಚಿಲುಮೆಗಳಿಂದ ಕೂಡಿ, ಹಸಿರು ಬನದಂತಿದೆ. ಮುಕ್ಕಾಗಿ ಬಿದ್ದಿರುವ ಜಿನಮೂರ್ತಿಗಳು, ಶಿಲಾಶಾಸನಗಳು, ನಂದಿಯ ವಿಗ್ರಹಗಳು, ದೇವಾಲಯದ ಮುರಿದ ಕಲ್ಲುಗಳು ಚೆಲ್ಲಾಡಿವೆ. ಎಲ್ಲಮ್ಮನ ಮಂದಿರದ ಸಮೀಪದಲ್ಲೇ ಇರುವ ನಂದಿ ಬಾವಿ ಹಾಗೂ ಸಿಡಿಲುಬಾವಿಗಳ ನೀರು ಸಿಹಿಯಾಗಿದೆ. ಅವುಗಳಲ್ಲಿ ಎಲ್ಲ ಋತುಗಳಲ್ಲೂ ನೀರು ಒಂದೇ ಮಟ್ಟದಲ್ಲಿರುತ್ತದೆ. ನಾಗಾಯಿಯಲ್ಲಿ 61 ಕಂಬಗಳ ದೇವಾಲಯವೊಂದಿದೆ. ಇದು ಜೈನ ಶೈಲಿಯದು. ದೇವಸ್ಥಾನದ ಮುಂದೆ ಇರುವ 7 ಎತ್ತರದ ದೀರ್ಘ ಚತುರಸ್ರಾಕಾರದ ಸ್ತಂಭದ ಮೇಲಿರುವ ಶಾಸನ ಚಾಳುಕ್ಯರ ಆಡಳಿತವನ್ನು ಕುರಿತದ್ದು.

	4 ಕಾಳಗಿ : ಚಿತ್ತಾಪುರ ರೈಲ್ವೆ ನಿಲ್ದಾಣದಿಂದ 20 ಮೈ. ದೂರದಲ್ಲಿದೆ. ಇಲ್ಲಿ ಕಾಳೇಶ್ವರ ಮತ್ತು ನರಸಿಂಹ ದೇವಾಲಯಗಳಿವೆ. ಇಲ್ಲಿಗೆ ದಿನವೂ ಯಾತ್ರಿಕರು ಬರುತ್ತಾರೆ. ಪ್ರತಿ ವರ್ಷ ಮೇ ತಿಂಗಳಲ್ಲಿ ಇಲ್ಲಿ ಜಾತ್ರೆ ನಡೆಯುತ್ತದೆ. ಈ ಸ್ಥಳ ಬಾಣ ಮನೆತನದವರ ರಾಜಧಾನಿಯಾಗಿತ್ತೆಂದು ಶಾಸನಗಳಿಂದ ತಿಳಿದು ಬರುತ್ತದೆ. ಈ ಊರಿಗೆ ಮಾನ್ಯದಡಿ ಸಾಸಿರವೆಂಬ ಹೆಸರೂ ಇದ್ದಂತೆ ತೋರುತ್ತದೆ. ಗುಲ್ಬರ್ಗದಿಂದ ಇಲ್ಲಿಗೆ ಪ್ರತಿದಿನವೂ ಬಸ್ಸುಗಳು ಓಡಾಡುತ್ತವೆ.

	5 ಯರಗೋಳ : ಚಿತ್ತಾಪುರದ ಹತ್ತಿರದಲ್ಲಿರುವ ಊರು. ಟೀಕಾ ಚಾರ್ಯರೆಂದು ಪ್ರಸಿದ್ಧರಾದ ಜಯತೀರ್ಥರು ತಪಸ್ಸುಮಾಡಿದ ಗುಹೆ ಇಲ್ಲಿದೆ. ಅವರು ನ್ಯಾಯಸುಧಾವನ್ನು ಇಲ್ಲಿಯೇ ರಚಿಸಿದರೆಂದು ಪ್ರತೀತಿ.

	6 ಇಂಗಳಗಿ : ಇದು ನಾಲ್ಕನೆಯ ಚಾಳುಕ್ಯ ವಿಕ್ರಮನ ಹೆಂಡತಿಯಾದ ಚಾಕಲಾದೇವಿಯ ರಾಜಧಾನಿಯಾಗಿತ್ತು. ಇಲ್ಲಿ ಹಿಂದೆ ಆನೆಗಳ ವ್ಯಾಪಾರ ನಡೆಯುತ್ತಿತ್ತೆನ್ನಲಾಗಿದೆ.

	7 ಭಂಕೂರು : ಶಹಾಬಾದ್ ಪಟ್ಟಣದಿಂದ ಒಂದು ಮೈ. ಅಂತರದಲ್ಲಿದೆ. ಇಲ್ಲಿ ಅನೇಕ ಜಿನಾಲಯಗಳೂ ಶಾಸನಗಳೂ ಇವೆ. ಶಾಸನಗಳಲ್ಲಿ ಈ ಊರನ್ನು ಭೂಮುಕುರ ಎಂದು ಕರೆಯಲಾಗಿದೆ. ಈ ಊರಿನ ಹೊರಗೆ ಬಿದ್ದಿರುವ ವರ್ಧಮಾನನ ಮೂರ್ತಿಯನ್ನು ಬತ್ತಲೆಯ ಗೌರಮ್ಮನೆಂದೂ, ಸಿಂಹಪೀಠವನ್ನು ಅಣಕಿಸುವಕಲ್ಲು ಎಂದೂ ಅರಿಯದ ಜನ ಕರೆಯುತ್ತಾರೆ. ಈ ಊರಿಗೆ ಅನತಿ ದೂರದಲ್ಲಿ ಬೃಹದಾಕಾರದ ಗಣಪತಿಯ ವಿಗ್ರಹವೊಂದುಂಟು. ಇದು ಸ್ವಯಂಭೂ ಗಣಪತಿಯೆಂಬುದಾಗಿ ಅಲ್ಲಿಯ ಜನರ ನಂಬಿಕೆ. ಇದರಂತೆ ಸ್ವಲ್ಪ ಕಿರಿದಾಗಿರುವ ಗಣಪತಿಯ ವಿಗ್ರಹ ಶಹಾಬಾದಿನಿಂದ ಗುಲ್ಬರ್ಗಕ್ಕೆ ಹೋಗುವ ಮಾರ್ಗದಲ್ಲಿದೆ. ಅದು ಈ ಗ್ರಾಮದ ಅಡವಿಗೆ ಹೊಂದಿಕೊಂಡೇ ಇದೆ.

	8 ಸನ್ನತಿ (ಸಂತಿ) : ಮುಂಬಯಿ-ಮದ್ರಾಸ್ ರೈಲುಮಾರ್ಗದ ನಾಲ್ವಾರ ನಿಲ್ದಾಣದಿಂದ 12 ಮೈ. ದೂರದಲ್ಲಿದೆ. ಇಲ್ಲಿ ಭೀಮಾನದಿಯ ದಂಡೆಯ ಮೇಲೆ ಇರುವ ಪುರಾತನವಾದ ಚಂದ್ರಲಾಪರಮೇಶ್ವರಿಯ ದೇವಸ್ಥಾನ ಅನೇಕ ಭಕ್ತರ ಯಾತ್ರಾಸ್ಥಳ. ಪೂರ್ವಾಭಿಮುಖವಾದ ಈ ಗುಡಿಯ ಮಹಾದ್ವಾರದ ಎರಡೂ ಪಕ್ಕಗಳಲ್ಲಿ ಎರಡು ದೊಡ್ಡ ಮಂಟಪಗಳಿವೆ. ದೇವಾಲಯದ ಆವರಣದಲ್ಲಿ ದ್ವಾದಶಲಿಂಗಗಳೂ, ಮಹಾಕಾಳಿ, ಮಹಾಲಕ್ಷ್ಮೀ, ಸರಸ್ವತಿಯರ ವಿಗ್ರಹಗಳೂ ಇವೆ. ಚಂದ್ರಲಾಂಬೆ ಪಶ್ಚಿಮ ಚಾಳುಕ್ಯರ ಕುಲದೇವತೆಯಾಗಿದ್ದಳೆಂದೂ ಚಾಮುಂಡೇಶ್ವರಿಯೆಂಬುದು ಈಕೆಯ ಪರ್ಯಾಯನಾಮವೆಂದೂ ತಿಳಿದು ಬರುತ್ತದೆ. ಈ ದೇವತೆ ಲಕ್ಷ್ಮಿಯ ಅವತಾರವಾದ ಸೀತಾದೇವಿಯೆಂದೂ ಜನ ನಂಬಿದ್ದಾರೆ. ಈಕೆಯನ್ನು ಕುರಿತು ಶ್ರೀ ಜಗದ್ಗುರು ಶಂಕರಾಚಾರ್ಯರು ಅಷ್ಟೋತ್ತರವನ್ನು ರಚನೆ ಮಾಡಿದ್ದಾರೆ. ಜಗನ್ನಾಥ ಪಂಡಿತ, ಲಿಂಗಸುಗೂರಿನ ಮುದ್ದುರಂಗ ಪ್ರಾಣೇಶ ವಿಠಲ ಇವರು ಈಕೆಯ ಭಕ್ತರಲ್ಲಿ ಮುಖ್ಯರು. ಬಲೂಚಿಸ್ಥಾನದ ಹಿಂಗಳಾದೇವಿಯ ಪೀಠದಿಂದ ಈ ಭಾಗದ ಭಕ್ತರನ್ನು ಉದ್ಧರಿಸಲು ಈಕೆ ಬಂದಳೆಂದು ಈ ದೇವಿಯ ಒಂದು ಪ್ರಾರ್ಥನಾಪದ್ಯ ಹೇಳುತ್ತದೆ. ಈ ಗುಡಿಯ ಸಮೀಪದಲ್ಲಿ ಮಾರ್ಕಂಡೇಯ ದೇವಾಲಯ, ಭೈರವ ತೀರ್ಥ ಹಾಗೂ ವಿಶ್ವಂಭರ ದೀಕ್ಷಿತರ ಸಮಾಧಿ ಇವೆ. ಈಚೆಗೆ ಇಲ್ಲಿ ಪ್ರಾಚೀನ ಬೌದ್ಧ ಅವಶೇಷಗಳೂ ಪ್ರಾಕೃತ ಮತ್ತು ಕನ್ನಡ ಶಾಸನಗಳೂ ದೊರೆತಿವೆ. ಈ ಸ್ಥಳ 3,4ನೆಯ ಶತಮಾನಗಳಲ್ಲಿ ಬೌದ್ಧಮತದ ಪವಿತ್ರಸ್ಥಾನವೆನಿಸಿ ಚಾಳುಕ್ಯರ ಕಾಲದಲ್ಲಿ ಶಕ್ತಿ ಪೀಠವೆಂದು ಖ್ಯಾತಿ ಪಡೆದಿತ್ತು. ಈಗ ಇಲ್ಲಿ ಪ್ರತಿವರ್ಷ ಮಾರ್ಚ್-ಏಪ್ರಿಲ್ ತಿಂಗಳುಗಳಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ.

	9 ವಾಡಿ : ಗುಲ್ಬರ್ಗದಿಂದ 20 ಮೈ. ದೂರದಲ್ಲಿದೆ. ಇದೊಂದು ಮುಖ್ಯ ರೈಲ್ವೆ ಜಂಕ್ಷನ್, ಮುಂಬಯಿ-ಮದ್ರಾಸ್ ರೈಲುಮಾರ್ಗವೂ ಹೈದರಾಬಾದ್ ರೈಲುಮಾರ್ಗವೂ ಇಲ್ಲಿ ಸಂಧಿಸುತ್ತವೆ. ಇಲ್ಲೊಂದು ವಿಶಾಲ ರೈಲ್ವೆ ಅಂಗಳವೂ ಲೋಕೊ ಷೆಡ್ಡೂ ಇವೆ. ನಿಲ್ದಾಣದ ಬಳಿಯಲ್ಲಿರುವ ವಸತಿಯಲ್ಲಿ ರೈಲ್ವೆ ನೌಕರರೇ ಹೆಚ್ಚು. ವಾಡಿಯಲ್ಲೊಂದು ಸಿಮೆಂಟ್ ಕಾರ್ಖಾನೆ ಸ್ಥಾಪಿತವಾಗಿದೆ.

	ಬಲವಡಿಗಿಯಲ್ಲಿ ಎಲ್ಲಮ್ಮ, ಕೊಂಚೂರಿನಲ್ಲಿ ಪ್ರಾಣದೇವರು. ದಂಡ ಗುಂಡದಲ್ಲಿ ಬಸವೇಶ್ವರ, ರೇವಾಯಿಯಲ್ಲಿ ರೇವಣಸಿದ್ಧೇಶ್ವರ, ಹೆಬ್ಬಾಳದಲ್ಲಿ ಅಣುವೀರಭದ್ರೇಶ್ವರ, ಹುನಗುಂಟೆಯಲ್ಲಿ ಕಾಗಿನಾಭೀಮಾ ಸಂಗಮದಲ್ಲಿ ಚಂದ್ರಲಾ ಪರಮೇಶ್ವರಿ, ಹಲಕರಟಿಯಲ್ಲಿ ವೀರಭದ್ರೇಶ್ವರ, ಕೋರವಾರದಲ್ಲಿ ವೀರಭದ್ರ ದೇವರು. ಸೂಗೂರಿನಲ್ಲಿ ವೆಂಕಟೇಶ್ವರ ದೇವರ ಜಾತ್ರೆಗಳು ಪ್ರತಿವರ್ಷವೂ ನಡೆಯುತ್ತವೆ. ಈ ಎಲ್ಲ ಸ್ಥಳಗಳೂ ಇತಿಹಾಸ ಮತ್ತು ಸಂಸ್ಕøತಿಯ ದೃಷ್ಟಿಯಿಂದ ಮಹತ್ತ್ವವುಳ್ಳವು. ತಾಲ್ಲೂಕಿನ ಹಲವೆಡೆಗಳಲ್ಲಿ ಶಿಲಾಶಾಸನಗಳೂ ಪ್ರಾಕ್ತನ ಅವಶೇಷಗಳೂ ಕಾಣಸಿಗುತ್ತದೆ.				   (ವಿ.ಕೆ.ಯು.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ